ಕ್ಯಾತೆ ತೆಗೆದಿತ್ತು
ಜೀವನ ಸಾವ ಜೊತೆಗೆ
ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು
ತುಸು ಗಂಭೀರವಾಗಿಯೇ !
ಜೀವನ, ನಾನು ಮೊದಲು !
ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ
ಭಿನ್ನ! ಭಿನ್ನ! ರಂಗು! ರಂಗು!
ಬೆಳಕು; ಸಂತಸ.
ಕರುಣಿಸುವೆನು
ಅಂಗಳದಿ ಸೋಲು, ಗೆಲುವು, ಸಮಾಧಾನ;
ತಮ್ಮ, ತಮ್ಮ ಗುಣಾವಗುಣ,
ಅಭಿರುಚಿ, ಅನುಕೂಲ, ಶಕ್ತಿ, ದೌರ್ಬಲ್ಯಗಳಿಗೆ ತಕ್ಕಂತೆ.
ತುಡಿಸುವೆನು
ನನ್ನ ಪಂದ್ಯದಲಿರಲು
ಎಲ್ಲವನು ಎಲ್ಲರನು ಸದಾ!
ಜೀವಂತಿಕೆಯೇ ನನ್ನ ಹೂರಣ.
ಮಾಡುವೆನು ಅದಲು, ಬದಲು
ನಿಧಾನವಾಗಿ, ವೇಗವಾಗಿ, ಬೇಕಾದ ಹಾಗೆ!
ನೆಚ್ಚದಂತೆ.
ನಿಲ್ಲಿಸೆನು ಯಾವುದನೂ ಒಂದೇ ಸ್ತರದಲಿ
ಕೆಲ, ಕೆಲವರನು ಬಿಟ್ಟು,
ನಾನು ವಿಕ್ಷಿಪ್ತನಲ್ಲ!
ಹುಟ್ಟಿ ಬರುವ ಎಲ್ಲಕ್ಕೂ ಎಲ್ಲರಿಗೂ ಸಲ್ಲುವೆನು
ನನ್ನಲ್ಲಿ ಅರಳಿ ಬೆಳೆದವರು ಸಾವ ಗೆಲುವರು
ಉಳಿಯುವರು; ಬೆಳಗುವರು
ಚರಿತ್ರೆಯಲಿ ಚಿರಕಾಲ.
ನಾನು ಸಾವು,
ಭಯ! ನೋವು! ಕತ್ತಲು! ಮೌನ!
ಸತ್ಯ! ಸಾರ್ವತ್ರಿಕ! ಬಿಡುಗಡೆ!!
ನನಗೆ ಸ್ವಾಗತವಿಲ್ಲ; ಆರಾಧನೆಯಿಲ್ಲ
ಯಾರೂ… ತಾವೇ ಬಂದು ಬೀಳರು
ನನ್ನ ಮಡಿಲಿಗೆ
ಬಹಳ ಬದುಕಲರಿಯದವರು; ಧೀರರು ವಿನಃ.
ಶರಣು!
ಸತ್ತು ಬದುಕುವ ಗೆದ್ದವರಿಗೆ
ನಾನು, ಈಗ… ಆಗ… ಯಾವಾಗ ಬೇಕಾದರೂ…
ಯಾವರೂಪದಲ್ಲಾದರೂ…
ಬಂದೆರಗಬಹುದು; ಮುಗಿಸಬಹುದು.
ಸತ್ಯವಿದನು ತಿಳಿದೂ… ತಿಳಿದೂ
ಏನು ನಿಲ್ಲಿಸದೆ ಎಲ್ಲವನು ಮಾಮೂಲಾಗಿ
ಮುಂದುವರಿಸುವ
ಜೀವ ವಿಶೇಷರಿಗೆ.
ಹುಟ್ಹುಟ್ಟಿ ಬರುವ
ಜೀವದಲೆ ಎಲೆಗಳು ಬಾಳಿ
ಹಣ್ಣಾಗಿ ಉದುರಬೇಕು
ಚಿಗುರಾಗಿ ಮೂಡಬೇಕು; ಬೆಳೆಯಬೇಕು
ಬಾಳೆಂಬ ತೇರು ತರು ಹೊಸ ಹೊಸದಾಗಿ
ಸಿಂಗಾರಗೊಳಬೇಕು
ಅರ್ಥಪೂರ್ಣವಾಗಬೇಕು.
ಇದು ನ್ಯಾಯ! ಸರ್ವ ಸಮ್ಮತ !
ಜಗದಲಿ ಶ್ರೇಷ್ಠ, ಕನಿಷ್ಠ ಪ್ರಶ್ನೆಯೇ ಅಸಂಗತ.
*****